ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ! ಹೌದಾ?

ಪ್ರೀತಿಯೆಂಬುದು ಒಂದು ಮಧುರ ಅನುಭೂತಿ. ಪ್ರೀತಿಯಿಂದಲೇ ಭೂಮಿಯಲ್ಲಿರುವ ಸಕಲ ಚರಾಚರಗಳು ಸಂತೃಪ್ತಿಯ ಜೀವನ ನಡೆಸುತ್ತವೆ. ಪ್ರೀತಿಯಲ್ಲಿ ಬೀಳುವುದು, ಪ್ರೀತಿಯಲ್ಲಿರುವುದು ಖುಷಿಯಿಂದ ಜೀವನ ನಡೆಸಲು ನೆರವಾಗುತ್ತದೆ.

ಎಲ್ಲಾ ಸಂಬಂಧಗಳಲ್ಲೂ ಪ್ರೀತಿಯಿದೆ. ಪ್ರೀತಿಯಿಲ್ಲದ ಯಾವ ಸಂಬಂಧವೂ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಪ್ರೀತಿಯೆಂಬುದೇ ಜಗತ್ತಲ್ಲಿರುವ ಕೆಟ್ಟದನ್ನು ಒಳ್ಳೆಯದಾಗಿಸುತ್ತದೆ. ಪ್ರೀತಿಯೆಂಬ ಸುಂದರ ಅನುಭವವನ್ನು, ಅಮಲನ್ನು ಪ್ರೀತಿಸಯೇ ತಿಳಿಯಬೇಕು, ಆದರೆ ಪ್ರೀತಿಸುವುದರಿಂದಲೂ ಅಪಾಯವಿದೆ ಅನ್ನೋದು ನಿಮಗೆ ಗೊತ್ತಾ ?

ಹೌದು, ನೀವು ಕೇಳಿರುವ ಮಾಹಿತಿ ನಿಜವಾಗಿದೆ. ನಾವು ಪ್ರೀತಿಸಿದಾಗ ಅಥವಾ ಪ್ರೀತಿಯಲ್ಲಿ ಬಿದ್ದಾಗ ಹೃದಯಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಪ್ರೀತಿಸುವಾಗ ನಮ್ಮ ದೇಹವು ಎಂಡಾರ್ಫಿನ್‌ಗಳು ಮತ್ತು ಆಕ್ಸಿಟೋಸಿನ್‌ನಂತಹ ಉತ್ತಮ ಹಾರ್ಮೋನುಗಳನ್ನು ಸ್ರವಿಸುತ್ತದೆ.  ಇದು ಮೆದುಳನ್ನು ಪೋಷಿಸುತ್ತದೆ ಮತ್ತು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದರೆ ಪ್ರೀತಿಯಲ್ಲಿ ತೊಂದರೆ ಕಾಣಿಸಿಕೊಂಡಾಗ, ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ.

ಪ್ರೊಫೆಸರ್ ಅನಿಮಾಶಾಹುನ್ ಪ್ರಕಾರ, ಪ್ರೀತಿಸದ ಮತ್ತು ಅವಿವಾಹಿತರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ನಡೆಸಿದ ಅಧ್ಯಯನದ ಮೂಲಕ ಈ ರೀತಿಯ ಜನರು ದೀರ್ಘಕಾಲ ಆರೋಗ್ಯಕರ, ಸಂತೋಷದ ಜೀವನವನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ. ಡಾ. ಒಗುನ್ನುಬಿ ಪ್ರಕಾರ, ಒಬ್ಬ ವ್ಯಕ್ತಿಯು ಪ್ರೀತಿಸುವ ಭಾವನೆಯನ್ನು ಕಳೆದುಕೊಂಡ ಕ್ಷಣ, ಖಿನ್ನತೆ ಅಥವಾ ಆತಂಕದಂತಹ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಮೆದುಳಿನಲ್ಲಿ ಅಡ್ರಿನಾಲಿನ್‌ನಂತಹ ಅಪಾಯಕಾರಿ ರಾಸಾಯನಿಕಗಳ ಅತಿಯಾದ ಸ್ರವಿಸುವಿಕೆ ಕಾರಣವಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಪ್ರಾಮಾಣಿಕವಾಗಿ ಪ್ರೀತಿಸುವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ದಂಪತಿಗಳು ಹೆಚ್ಚು ಕಾಲ ಬದುಕುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ.

ಪ್ರೀತಿ ಎಂದರೆ ಕೇವಲ ಬಟ್ಟೆ ಅಥವಾ ಉಡುಗೊರೆಗಳನ್ನು ಖರೀದಿಸುವುದು ಮಾತ್ರವಲ್ಲ. ವಿಶ್ವಾಸ, ಕಾಳಜಿ, ನಂಬಿಕೆ ಇದೆಲ್ಲವೂ ಪ್ರೀತಿ ವ್ಯಕ್ತಪಡಿಸುವ ಕ್ರಿಯೆಗಳಾಗಿವೆ. ಅಪ್ಪುಗೆಗಳು ಎಲ್ಲರೂ ನಿಯಮಿತವಾಗಿ ಸ್ವೀಕರಿಸಬೇಕಾದ ಪ್ರೀತಿಯ ಕ್ರಿಯೆಗಳಲ್ಲಿ ಒಂದಾಗಿದೆ. ಡಾ. ದೋಸೆಕುನ್ ಅವರ ಪ್ರಕಾರ, ಅಪ್ಪುಗೆಯ ಕ್ರಿಯೆಯಿಂದ ಮನುಷ್ಯರು ಉತ್ತಮವಾಗಿ ಬದುಕುತ್ತಾರೆ. ಏಕೆಂದರೆ ಪ್ರೀತಿಯು ಹೆಚ್ಚು ಕಾಲ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಿಳಿಸುತ್ತಾರೆ.

ಪ್ರೀತಿಸುವುದರಿಂದ ಹೃದಯ ಆರೋಗ್ಯಕ್ಕೂ ಅಪಾಯ:
ಪ್ರೀತಿಯಲ್ಲಿ ಬೀಳುವುದು ಅಥವಾ ಪ್ರೀತಿಸುವುದು ಒಬ್ಬರ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರೀತಿಸುವ ಕ್ರಿಯೆ ಲೈಂಗಿಕ ಅಂಗಗಳು ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಮನಸ್ಸು ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಹ ಕಂಡುಹಿಡಿಯಲಾಗಿದೆ.

ಹೃದಯದ ಸಮಸ್ಯೆಗಳು:
ಹೃದಯದ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ರೆಜಿನಾಲ್ಡ್ ಹೋ, ಗಂಭೀರ ಹೃದಯ ಸಮಸ್ಯೆಗಳಿರುವ ಜನರು ಪ್ರೀತಿಯಲ್ಲಿ ಬೀಳುವಾಗ ಜಾಗರೂಕರಾಗಿರಬೇಕು ಎಂದು ಸೂಚಿಸುತ್ತಾರೆ. ಯಾಕೆಂದರೆ ಪ್ರೀತಿಯಲ್ಲಿ ಬೀಳುವಾಗ, ಮೆದುಳು ಮೂತ್ರಜನಕಾಂಗದ ಗ್ರಂಥಿಗೆ ಸಂಕೇತಗಳನ್ನು ಕಳುಹಿಸುತ್ತದೆ, ಇದು ಅಡ್ರಿನಾಲಿನ್, ಎಪಿನ್ಫ್ರಿನ್ ಮತ್ತು ನೊರ್ಪೈನ್ಫ್ರಿನ್ ನಂತಹ ಹಾರ್ಮೋನುಗಳನ್ನು ಸ್ರವಿಸುತ್ತದೆ. ಇವು ರಕ್ತದ ಮೂಲಕ ಹರಿಯುತ್ತವೆ ಮತ್ತು ಹೃದಯವು ವೇಗವಾಗಿ ಮತ್ತು ಬಲವಾಗಿ ಬಡಿಯುವಂತೆ ಮಾಡುತ್ತದೆ.

ಹೃದಯದ ಬಡಿತವು ಹೆಚ್ಚಾದಾಗ, ಹೃದಯವು ಹೆಚ್ಚು ಆಮ್ಲಜನಕವನ್ನು ಬಳಸುತ್ತದೆ.  ಇದು ವಯಸ್ಸಾದ ವ್ಯಕ್ತಿ ಅಥವಾ ಈ ಮೊದಲು ಹೃದಯಾಘಾತವಾಗಿರುವ ವ್ಯಕ್ತಿಯ ಜೀವಕ್ಕೇ ಅಪಾಯವನ್ನುಂಟು ಮಾಡಬಹುದು. ಡಾ. ಒಗುನ್ನುಬಿಯವರ ಪ್ರಕಾರ, ‘ದೇಶಾದ್ಯಂತ ವಿವಿಧ ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿ ಗಣನೀಯ ಸಂಖ್ಯೆಯ ಯುವಕರು ಮತ್ತು ಯುವತಿಯರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ.